ರಾಬಸ್ಪಿಯರ್
1758 - 94. ಫ್ರಾನ್ಸಿನ ಜಾಕಾಬಿನ್ ಪಕ್ಷದ ನಾಯಕ ಮತ್ತು ಫ್ರಾನ್ಸ್‍ನ ಕ್ರಾಂತಿ ಪುರುಷರಲ್ಲಿ ಒಬ್ಬ. ಮ್ಯಾಕ್ಸಿಮಿಲಿಯನ್ ಫ್ರಾನ್ಸ್‍ಸ್ವ ಮಾರಿ ಎಜಿಡಾರ್ ಡ ಎಂಬುದು ಇವನ ನಿಜನಾಮ. ಫ್ರಾನ್ಸಿನ ಅರಾಸ್ ಎಂಬಲ್ಲಿ 6 ನೇ 1758 ರಲ್ಲಿ ಜನಿಸಿದ. ಆಗ ಫ್ರಾನ್ಸ್‍ನ ಆಳ್ವಿಕೆ ಶೋಷಣೆ, ಬಡತನ, ಭ್ರಷ್ಟಾಚಾರ, ದಬ್ಬಾಳಿಕೆ ಮುಂತಾದ ಅನಿಷ್ಟಗಳ ತಾಣವಾಗಿ ಕ್ರಾಂತಿಯ ಜ್ವಾಲೆ ಉರಿಯಲು ಕಾಲ ಕೂಡಿಬಂದಿತ್ತು. ಇಂಥ ಹೊತ್ತಿನಲ್ಲಿ ಈತ ಫ್ರಾನ್ಸಿನ ಮಹಾಕ್ರಾಂತಿಯ ಪ್ರಧಾನ ಪಾತ್ರಧಾರಿಯಾದ.

ರಾಬಸ್ಪಿಯರ್ ಪ್ಯಾರಿಸ್ಸಿನಲ್ಲಿ ಶಿಕ್ಷಣ ಪಡೆದು ಅನಂತರ ಕಾನೂನು ವಿಷಯವನ್ನು ಅಧ್ಯಯನ ಮಾಡಿ ಅರಾಸ್‍ನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದ. ಉದಾರ ಚಿಂತಕ ಮತ್ತು ಪ್ರಭಾವಶಾಲಿ ವಾಗ್ಮಿ ಎಂಬುದಾಗಿ ಪ್ರಖ್ಯಾತನಾಗಿದ್ದ. ಈತ 1789 ರಲ್ಲಿ ರಾಜ್ಯದ ಸಾಮಾನ್ಯ ಸಭೆಗೆ ಆರ್ಟ್‍ವಾದ ಪ್ರತಿನಿಧಿಯಾಗಿ ಚುನಾಯಿತನಾದ. ರೂಸೊವಿನ ಸಾಮಾಜಿಕ ಸಿದ್ಧಾಂತಗಳ ಪ್ರಮುಖ ಪ್ರತಿಪಾದಕನಾಗಿದ್ದ ಈತ ರಾಜ್ಯ ವ್ಯವಸ್ಥಾ ಸಭೆಯಲ್ಲಿ ತೀವ್ರವಾದಿ ವಾಮಪಂಥೀಯನಾಗಿದ್ದ.

ಬಂಡವಾಳಶಾಹಿ ಪರವಾದಿಗಳ ವಿರುದ್ಧ ಹೆಚ್ಚಿನದೇನನ್ನೂ ಸಾಧಿಸಲು ಸಾದ್ಯವಾಗದೆ ಹೋದಾಗ ಈತ ಜಾಕಾಬಿನ್ ಕ್ಲಬ್ಬನ್ನು ತನ್ನ ಕಾರ್ಯ ಚಟುವಟಿಕೆಗಳ ಕೇಂದ್ರವನ್ನಾಗಿಸಿಕೊಂಡ. 1 ಏಪ್ರಿಲ್ 1791 ರಲ್ಲಿ ಮೀರಬೊ ನಿಧನನಾದಾಗ ಈತನನ್ನೇ ಕ್ರಾಂತಿಕಾರಿ ನಾಯಕನೆಂದು ಪರಿಗಣಿಸಿ ಗೌರವಿಸಲಾಯಿತು. ಒಂದು ತಿಂಗಳ ಅನಂತರ ಈತ ಹಾಲಿ ಸಂವಿಧಾನ ಸಭೆಯ ಸದಸ್ಯರು ಮುಂದಿನ ಶಾಸನ ಸಭೆಗೆ ಬರಕೂಡದೆಂಬ ಪ್ರತಿಬಂಧಕವನ್ನು ವಿಧಿಸಿದಂತಹ ಸುಪ್ರಸಿದ್ಧವಾದ ಅದರ ತೀರ ಗಂಭೀರವಾದ ಪ್ರಸ್ತಾಪವನ್ನು ಮುಂದಿಟ್ಟ. ಅದೇ ವರ್ಷ ಜೂನ್ ತಿಂಗಳಲ್ಲಿ ಈತ ಸ್ಪೇನ್‍ನ ನ್ಯಾಯಾಸ್ಥಾನದಲ್ಲಿ ಸರ್ಕಾರದ ವಕೀಲನಾಗಿ ಚುನಾಯಿತನಾದ. ಜುಲೈ ತಿಂಗಳಲ್ಲಿ ಜನರು ಇವನನ್ನು ಹಾಗೂ ಪೇಟ್ಯಾನ್ - ಡೀ - ವೀಲ್‍ನೋವ್‍ನನ್ನೂ ಪರಿಶುದ್ಧ ದೇಶ ಪ್ರೇಮಿಗಳೆಂದು ಕೊಂಡಾಡಿದರು.

ರಾಬಸ್ಪಿಯರ್ ಗಿರೋಂಡಿಸ್ಟರ ಯುದ್ಧ ನೀತಿಯನ್ನು ವಿರೋಧಿಸಿದ ಮತ್ತು ರಾಷ್ಟ್ರೀಯ ಸಭೆಗೆ ಚುನಾಯಿತನಾಗಿ ಸಾರ್ವಜನಿಕ ನೀತಿ ಅನ್ವಯ ಫ್ರಾನ್ಸಿನ ದೊರೆ 16 ನೆಯ ಲೂಯಿಯನ್ನು ಗಲ್ಲಿಗೇರಿಸಬೇಕೆಂದು ವಾದಿಸಿದ. 1793 ರಲ್ಲಿ ಜುಲೈ ತಿಂಗಳಲ್ಲಿ ಈತ ಸಾರ್ವಜನಿಕ ರಕ್ಷಣಾ ಸಮಿತಿಗೆ ಚುನಾಯಿಸಲ್ಪಟ್ಟ. ಆ ಸಮಿತಿಯ ನೀತಿ ನಿರೂಪಣೆಯಲ್ಲಿ ಈತನ ಪ್ರಭಾವ ಅಷ್ಟೇನು ಇರಲಿಲ್ಲವಾದ್ದರೂ ಈತ ಭಯೋತ್ಪಾದಕ ಆಳ್ವಿಕೆಯ ಸಮಯದಲ್ಲಿ ಈ ಸಮಿತಿಯ ನೀತಿ ಪ್ರಚಾರಕ್ಕಾಗಿ ಪ್ರಮುಖ ಪಾತ್ರವಹಿಸಿದ. ಹರ್ಬಟ್ ಡೆಸಿಯೊಲಿನಸ್ ಮತ್ತು ಡಾಂಟನ್ ಈ ಮೂವರು ಪ್ರಮುಖರನ್ನು ಶಿಕ್ಷೆಗೆ ಗುರಿಪಡಿಸುವ ವಿಷಯದ ಪರವಾಗಿ ಈತ ವಾದಿಸಿದ. ಕಾಲಕ್ರಮೇಣ ಈತ ತನ್ನ ಅಧಿಕಾರವನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಮತ್ತು ಸಮಿತಿಯ ಇತರ ಸದಸ್ಯರ ಪ್ರಬಾವವನ್ನು ಕುಂಠಿತಗೊಳಿಸುವುದರಲ್ಲಿ ಸಫಲನಾದ. 1794 ರ ಮೇ ತಿಂಗಳಲ್ಲಿ ಇವನು ಕ್ರಾಂತಿಯ ವಿಚಾರಧಾರೆಯ ಮೇಲೆ ತನ್ನ ರಾಜಕೀಯ, ಧಾರ್ಮಿಕ ಅನುಭವವಾದವನ್ನು ಹೇರುವದರಲ್ಲಿ ಯಶಸ್ವಿಯಾದ. ಜೂನ್ 10 ರಂದು ನ್ಯಾಯಸ್ಥಾನದಲ್ಲಿ ಕಾರ್ಯವಿಧಾನವನ್ನು ನಿಯಂತ್ರಿಸುವಂಥ ಒಂದು ಕಾಯ್ದೆಯನ್ನು ಜಾರಿಗೆ ತರುವುದರಲ್ಲಿ ಸಫಲನಾದ. ಇದರಿಂದ ಅಮಾನುಷ ಕಗ್ಗೊಲೆಗಳಿಗೆ ಮಾರ್ಗವಾದಂತಾಗಿ ಫ್ರಾನ್ಸ್ ದೇಶದ ಮಣ್ಣು ಅನೇಕ ನಿರಪರಾಧಿಗಳ ರಕ್ತದಿಂದ ಕೆಂಪಾಯಿತು.

ತೀವ್ರವಾದಿ ರಾಜಕೀಯ ಚದುರಂಗದಾಟದಲ್ಲಿ ಅತ್ಯಂತ ಪ್ರತಿಭಾವಂತನಾಗಿದ್ದ ರಾಬಸ್ಪಿಯರ್ ಜಾಕಾಭಿಯನ್ನರನಾಯಕನಾಗಿದ್ದು ರಾಷ್ಟ್ರನೀತಿಯ ನಿರ್ದೇಶಕನಾಗುವ ಮೊದಲೇ ಪ್ಯಾರಿಸ್ಸಿನ ಕ್ರಾಂತಿಕಾರಿ ಸಾಧನದ ಮೇಲೆ ತನ್ನ ಹಿಡಿತವನ್ನಿಟ್ಟುಕೊಂಡಿದ್ದ. ತನ್ನ ಅಭಿಪ್ರಾಯಗಳನ್ನು ವಿರೋಧಿಸುತ್ತಿದ್ದವರ ನಿವಾರಣೆಗಾಗಿ ಈತ ನಿರ್ದಯವಾಗಿ ಗಿಲೊಟಿನ್ ಯಂತ್ರ ಬಳಸಿದ. ಜುಲೈ 26 ರಂದು ಇವನು ಸಾರ್ವಜನಿಕ ಭದ್ರತಾ ಸಮಿತಿಯನ್ನು ಬದಲಾಯಿಸಲು ಪ್ರಯತ್ನಿಸಿದಾಗ ಪ್ರಬಲ ವಿರೋಧವನ್ನು ಎದುರಿಸಬೇಕಾಯಿತು. ನಿರಂಕುಶಾಧಿಪತಿ ಎಂಬ ದೋಷಾರೋಪಣೆಗೆ ಗುರಿಯಾದ. ಬರಾಸ್ ಮತ್ತು ಟಾಲ್ಯನ್ ನೇತೃತ್ವದಲ್ಲಿ ಸಭೆಯ ಸದಸ್ಯರು ಸರ್ವಾಧಿಕಾರಿ ನಾಶವಾಗಲೇಬೇಕೆಂದು ನಿರ್ಧರಿಸಿದಳು. 2794 ರಲ್ಲಿ ಹೋಟೆಲ್ - ಡಿ - ವಿಲ್ಲೆಯಲ್ಲಿ ಗುಂಡೇಟಿನಿಂದ ಘಾಸಿಕೊಂಡಿದ್ದ ರಾಬಸ್ಪಿಯರ್‍ನನ್ನು ದಸ್ತಗಿರಿ ಮಾಡಿ ಶಿಕ್ಷಾರ್ಹನೆಂದು ನಿರ್ಧರಿಸಲಾಯಿತು. ಸೇಂಟ್ ಜೆಸ್ಟ್ ಕೌತಾನ್ ಮೊದಲಾದ ಇತರ ಹತ್ತೊಂಬತ್ತು ಜನರೊಂದಿಗೆ ರಾಬಸ್ಪಿಯರ್‍ನನ್ನೂ 28 ಜುಲೈ 1794 ರ ಗಿಲೊಟಿನ್ನಿಗೆ ಹಾಕಲಾಯಿತು.
(ಜಿ.ಎಲ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ